Asianet Suvarna News Asianet Suvarna News

ಕೈದಿಗಳ ತರಕಾರಿ ಬೆಳೆಯಿಂದ ಕಾರಾಗೃಹಕ್ಕೆ ಲಕ್ಷ ರು. ಆದಾಯ!

ದೇವನಹಳ್ಳಿಯಲ್ಲಿರುವ ಜೈಲಿನಲ್ಲಿ ಕೈದಿಗಳು ನಡೆಸುತ್ತಿರುವ ಕೃಷಿಯಿಂದ ಲಕ್ಷ ಲಕ್ಷ ಆದಾಯ ಬರುತ್ತಿದೆ. 

Devanahalli Jail Gets Lakh Of Income From Agriculture
Author
Bengaluru, First Published Oct 25, 2019, 11:24 AM IST

ಬೆಂಗಳೂರು [ಅ.25]:  ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಾರಾಗೃಹದಲ್ಲಿ ಬಂದಿಯಾದ ಕೈದಿಗಳೇ ಇದೀಗ ಕಾರಾಗೃಹಕ್ಕೆ ಲಕ್ಷಾಂತರ ರುಪಾಯಿ ತಂದು ಕೊಡುತ್ತಿದ್ದಾರೆ!

ಕೊಲೆ, ಸುಲಿಗೆ, ದರೋಡೆ ಸೇರಿದಂತೆ ವಿವಿಧ ಅಪರಾಧ ಕೃತ್ಯದಲ್ಲಿ ಸೆರೆವಾಸ ಅನುಭವಿಸುತ್ತಿರುವ ಕೈದಿಗಳು ಕೃಷಿ, ಹೈನುಗಾರಿಕೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ದೇವನಹಳ್ಳಿಯ ಬಯಲು ಕಾರಾಗೃಹಕ್ಕೆ ಪ್ರತಿ ತಿಂಗಳು ಸುಮಾರು 1ರಿಂದ 1.5 ಲಕ್ಷ ರುಪಾಯಿ ಆದಾಯ ತಂದು ಕೊಡುತ್ತಿದ್ದಾರೆ.

ಈ ಕೈದಿಗಳು ಬೆಳೆದ ಧಾನ್ಯ, ಹಣ್ಣು, ತರಕಾರಿ, ಸೊಪ್ಪು್ಪ ಹಾಗೂ ಇನ್ನಿತರ ಕೃಷಿ ಉತ್ಪನ್ನಗಳನ್ನು ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಮಾರಾಟ ಮತ್ತು ಪ್ರದರ್ಶನ ಮಾಡಲಾಗುತ್ತಿದೆ.

ಸುಮಾರು 113 ಎಕರೆ ವಿಶಾಲ ಪ್ರದೇಶದಲ್ಲಿರುವ ದೇವನಹಳ್ಳಿಯ ಬಯಲು ಕಾರಾಗೃಹದಲ್ಲಿ 1972 ರಿಂದಲ್ಲೂ ಕೃಷಿ ಮತ್ತು ಹೈನುಗಾರಿಕೆ ಚಟುವಟಿಕೆಗಳ ಮೂಲಕ ಕೈದಿಗಳ ಮನಪರಿರ್ವತನೆ ಹಾಗೂ ಪುನರ್ವಸತಿ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ. ಸದ್ಯ ಈ ಬಯಲು ಕಾರಾಗೃಹದಲ್ಲಿ 40 ಕೈದಿಗಳಿದ್ದಾರೆ. ಬಯಲು ಕಾರಾಗೃಹದಲ್ಲಿ ರಾಗಿ, ತೊಗರಿ, ಹುರುಳಿ ಹಾಗೂ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಜತೆಗೆ ತೋಟಗಾರಿಕಾ ಬೆಳೆಗಳಾದ ಮಾವು, ಸೀಬೆ, ನಿಂಬೆ, ಹಲಸು, ಸಪೋಟ, ಬಾಳೆ, ದಾಕ್ಷಿ, ಸೀತಾಫಲ, ಬೆಟ್ಟದ ನೆಲ್ಲಿಕಾಯಿ, ನೇರಳೆ, ಚಕ್ಕೋತ ಬೆಳೆಯಲಾಗುತ್ತಿದೆ. ಇನ್ನು ತರಕಾರಿ ಬೆಳೆಗಳಾದ ಹೀರೆಕಾಯಿ, ಸೋರೆಕಾಯಿ, ಪಡವಲಕಾಯಿ, ಬದನೆಕಾಯಿ, ನುಗ್ಗೇಕಾಯಿ, ಮೂಲಂಗಿ, ಮೆಣಸಿಕಾಯಿ ಬೆಳೆಯಲಾಗುತ್ತದೆ. ವಿವಿಧ ರೀತಿಯ ಸೊಪ್ಪುಗಳಾದ ಮೆಂತ್ಯ, ದಂಟು, ಪಾಲಾಕ್‌, ಸಬ್ಬಿಗೆ, ಚಕೋತ ಸಹ ಬೆಳೆಯಲಾಗುತ್ತಿದೆ.

ಹೈನುಗಾರಿಕೆ ಕೃಷಿ:  ಅಷ್ಟೇ ಅಲ್ಲ ಕಾರಾಗೃಹದಲ್ಲಿ ಬಂಡೂರ ತಳಿಯ ಸುಮಾರು 60 ಕುರಿ, ಯಾರ್ಕ್ಶೈರ್‌ ತಳಿಯ ಹಂದಿ, ಮೀನು, ಕೋಳಿ ಹಾಗೂ ರೇಷ್ಮೆ ಹಾಗೂ ಮಿಶ್ರ ತಳಿಯ 20 ಹಸು ಸಾಕಾಣಿಕೆ ಮಾಡಲಾಗುತ್ತಿದೆ. ಪ್ರತಿದಿನ ಸುಮಾರು 100 ಲೀಟರ್‌ಗೂ ಅಧಿಕ ಪ್ರಮಾಣದ ಹಾಲು ಉತ್ಪಾದಿಸಲಾಗುತ್ತಿದೆ. ಕಾರಾಗೃಹದಿಂದ ಬಿಡುಗಡೆಯಾದ ಅನೇಕ ಮಂದಿ ಕೈದಿಗಳು ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದು ಜೈಲು ಭದ್ರತಾ ಸಿಬ್ಬಂದಿ ರಂಗರಾಮಯ್ಯ ಮಾಹಿತಿ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೈದಿಗಳ ಆಯ್ಕೆ ವಿಶೇಷ :  ಬೆಂಗಳೂರು, ಮೈಸೂರು, ವಿಜಯಪುರ, ಬಳ್ಳಾರಿ ಸೇರಿದಂತೆ ರಾಜ್ಯದ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳನ್ನು ಈ ಬಯಲು ಕಾರಾಗೃಹಕ್ಕೆ ವಿಶೇಷ ಮಂಡಳಿ ರಚನೆ ಮಾಡಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವೈದ್ಯಕೀಯ ತಪಾಸಣೆ ಸೇರಿದಂತೆ ವಿವಿಧ ಪರೀಕ್ಷೆ ನಡೆಸಿ ಮಂಡಳಿಯ ಅಧಿಕಾರಿಗಳು ಒಪ್ಪಿಗೆ ನೀಡಿದ ಬಳಿಕವೇ ದೇವನಹಳ್ಳಿಯ ಬಯಲು ಕಾರಾಗೃಹಕ್ಕೆ ಕೈದಿಗಳ ಹಸ್ತಾಂತರ ಮಾಡಲಾಗುತ್ತಿದೆ. ಈ ಕಾರಾಗೃಹದ ವಿಶೇಷ ಎಂದರೆ ಬಯಲು ಕಾರಾಗೃಹದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಕೈದಿಗಳಿಗೆ ಒಂದು ವರ್ಷ ಸೆರೆವಾಸ ಅನುಭವಿಸಿದರೆ ನಾಲ್ಕು ತಿಂಗಳು ಕ್ಷಮಾದಾನ ಸಿಗಲಿದೆ. ಜತೆಗೆ ವೇತನವನ್ನೂ ನೀಡಲಾಗುತ್ತದೆ.

Follow Us:
Download App:
  • android
  • ios