Asianet Suvarna News Asianet Suvarna News

ಲೋಕಾಪುರದ ರೋಗಗ್ರಸ್ತ ಮಾರ್ಕೆಟ್‌ಗೆ ಬೇಕಿದೆ ಚಿಕಿತ್ಸೆ!

ತಿಪ್ಪೆಯಾಗಿ ಮಾರ್ಪಟ ಲೋಕಾಪುರ ತರಕಾರಿ ಮಾರುಕಟ್ಟೆ| ಕೊಳಚೆಯಿಂದ ರೋಗಗಳ ಭೀತಿ| ಕೊಳೆತ ಟೋಮೆಟೋ, ಈರುಳ್ಳಿ, ಬದನೆಕಾಯಿಗಳನ್ನು ರಸ್ತೆಯಲ್ಲಿಯೇ ಹಾಕುತ್ತಾರೆ| ತಿನ್ನಲ್ಲು ದನ, ಎಮ್ಮೆ, ಹಂದಿಗಳು ಬರುತ್ತವೆ| ಇದರಿಂದ ಕಾಯಿ ಪಲ್ಲೇ ವ್ಯಾಪಾರಸ್ಥರಿಗೆ ಮತ್ತು ಖರೀದಿ ಮಾಡುವವರಿಗೆ ಮುಜುಗುರ| ಮಳೆಯಾದರೆ ಸಾಕು ಕೆಸರಿನ ಗದ್ದೆಯಂತಾಗುತ್ತದೆ|

No Clean in Lokapur Vegetable Market in Bagalkot District
Author
Bengaluru, First Published Oct 30, 2019, 12:05 PM IST

ಶ್ರೀನಿವಾಸ ಬಬಲಾದಿ 

ಲೋಕಾಪುರ[ಅ.30]: ಅಭಿವೃದ್ಧಿ ಕಾಣದೆ ಪಟ್ಟಣದಲ್ಲಿರುವ ದಿನದ ಸಂತೆ ಅಕ್ಷರಶಃ ಕೆಸರಿನ ಗದ್ದೆ ಆಗಿದೆ. ಮಾರುಕಟ್ಟೆ ಅಸ್ವಚ್ಛತೆಯಿಂದ ಕೂಡಿರುವುದರಿಂದ ವ್ಯಾಪಾರಸ್ಥರು ಹಾಗೂ ಗ್ರಾಹಕರು ನಿತ್ಯ ರೋಗದ ಭಯದಲ್ಲೇ ವ್ಯಾಪಾರ ಮಾಡುವಂತಾಗಿದೆ.

ದುಸ್ಥಿತಿಯಲ್ಲಿರುವ ದಿನದ ಸಂತೆ ಮೈದಾನದಲ್ಲಿ ಪ್ರತಿ ದಿವಸ ಕಾಯಿಪಲ್ಯೆ ಸಂತೆ ನಡೆಯುತ್ತದೆ. ಸಂತೆ ರಸ್ತೆಯಲ್ಲಿಯೇ ವ್ಯಾಪಾರಸ್ಥರು ಕಾಯಿಪಲ್ಯೆ ಮಾರಾಟ ಮಾಡುತ್ತಾರೆ. ಸೂಪರ್‌ ಮಾರ್ಕೆಟ್‌ ಆಗಬೇಕಾಗಿದ್ದ ದಿನದ ಸಂತೆ ಜಾಗ ಇದೀಗ ಮಳೆಯ ಕಾರಣ ಕೊಳಚೆ ಪ್ರದೇಶದಂತೆ ಕಾಣುತ್ತಿದೆ. ವಿವಿಧ ವಸ್ತುಗಳನ್ನು ಹಾಗೂ ತರಕಾರಿ ಕೊಂಡುಕೊಳ್ಳಲು ಬರುವ ಜನರು ವ್ಯವಸ್ಥೆಯ ವಿರುದ್ಧ ಕಿಡಿಕಾರುತ್ತಲೇ ಕೆಸರಿನಲ್ಲಿಯೇ ಓಡಾಡಿ ಸಾಮಗ್ರಿಗಳನ್ನು ಖರೀದಿಸುತ್ತಾರೆ.

ಶಾಲಾ ಆವರಣದಲ್ಲಿಯೇ ಮಲಮೂತ್ರಿ ವಿಸರ್ಜನೆ:

ಇದೇ ಸ್ಥಳದಲ್ಲಿ ಹಂದಿ, ಬಿಡಾಡಿ ನಾಯಿ ಹಾಗೂ ಜಾನುವಾರುಗಳು ಗಲೀಜು ಮಾಡುತ್ತವೆ. ಕಾಯಿಪಲ್ಯೆ ವ್ಯಾಪಾರಸ್ಥರು ಬರುವಾಗ ತಮ್ಮ ಸಾಮಾನುಗಳನ್ನು ತೆಗೆದುಕೊಂಡು ಬಂದಿರುತ್ತಾರೆ. ಕೊಳೆತ ಟೋಮೆಟೋ, ಈರುಳ್ಳಿ, ಬದನೆಕಾಯಿಗಳನ್ನು ರಸ್ತೆಯಲ್ಲಿಯೇ ಹಾಕಿ ಹೋಗುತ್ತಾರೆ. ಇದನ್ನು ತಿನ್ನಲ್ಲು ದನ, ಎಮ್ಮೆ, ಹಂದಿಗಳು ಬರುತ್ತವೆ. ಇದರಿಂದ ಕಾಯಿ ಪಲ್ಲೇ ವ್ಯಾಪಾರಸ್ಥರಿಗೆ ಮತ್ತು ಖರೀದಿ ಮಾಡುವವರಿಗೆ ಮುಜುಗುರವಾಗಿದೆ. ಎಷ್ಟುಜನರಿಗೆ ಬಿಡಾಡಿ ದನಗಳು ನೂಕಿದ್ದು ಉಂಟು. ಅದರಲ್ಲಿ ಮಳೆಯಾದರೆ ಸಾಕು ಕೆಸರಿನ ಗದ್ದೆಯಂತಾಗಿದೆ.

ಪರದಾಟ:

ಹಲವಾರು ವರ್ಷಗಳಿಂದ ಸಂಜೆ ವೇಳೆ ಕಾಯಿಪಲ್ಯೆ ತರಲು ಹೋದರೆ ಮೂಗು ಮುಚ್ಚಿಕೊಂಡೆ ವ್ಯಾಪಾರಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸಿಲ್ಲ. ಗ್ರಾಪಂ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹೃದಯ ಭಾಗದಲ್ಲಿರುವ ಈ ಸಂತೆ ಅಭಿವೃದ್ಧಿ ಕಾಣದೆ ರೋಗಗ್ರಸ್ತವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಮಳೆಗಾಲದಲ್ಲಿ ಬಿದ್ದ ಮಳೆ ನೀರು ಸಮರ್ಪಕವಾಗಿ ಹೊರಹೋಗಲು ವ್ಯವಸ್ಥೆಗಳಿಲ್ಲ. ಚರಂಡಿಗಳು ಇದ್ದರೂ ಇಲ್ಲದಂತಾಗಿದೆ. ರಸ್ತೆಗಳು ಇದ್ದರೂ ಕೆಸರಿನಿಂದ ಕೂಡಿದ ರಸ್ತೆಗಳಾಗಿವೆ. ಇಂತಹ ಕೆಟ್ಟರಸ್ತೆಗಳ ಮೇಲೆ ಓಡಾಡುವರ ಕಾಲುಗಳಲ್ಲಿ ರಾಡಿ ಹುಣ್ಣು, ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಅಷ್ಟೇ ಅಲ್ಲದೆ ಮಾರಕ ರೋಗಗಳು ಅಂಟಿಕೊಳ್ಳುತ್ತವೆ. ವ್ಯಾಪಾರ ಮಾಡಲು ಬಂದರೆ ಕೆಸರು ನೋಡಿದರೆ ವಾಕರಿಕೆ ಬರುವಂತಿದೆ. ಸಂತೆಗೆ ಬರುವ ಮಹಿಳೆಯರಂತೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಷ್ಟೇ ಗದ್ದಲಿನಲ್ಲಿ ಬೈಕ್‌ ಸವಾರರು ಕೂಡಾ ವ್ಯಾಪಾರಸ್ಥರನ್ನು ಮತ್ತು ಸಾರ್ವಜನಿಕರಿಗೆ ಮೈಗೆ ತಾಗಿಸಿಕೊಂಡೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಾರೆ ಲೋಕಾಪುರ ಪಟ್ಟಣ ಬೆಳೆದಂತೆ ಕಾಯಿಪಲ್ಯೆ ಮಾರುಕಟ್ಟೆಯ ವ್ಯಾಪಾರ ಕೂಡ ಅಭಿವೃದ್ಧಿ ಹೊಂದುತ್ತದೆ ಎಂಬುದನ್ನು ಅರಿತು ಅದಕ್ಕಾಗಿ ಬೇರೆ ಕಡೆ ಸ್ಥಳಾವಕಾಶ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

25 ವರ್ಷಗಳಿಂದ ನಾವು ಇಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಗ್ರಾಪಂನವರ ನಿರ್ಲಕ್ಷ್ಯ ಹಾಗೂ ಸಾರ್ವಜನಿಕರು ಕಸ ಹಾಕುವುದರಿಂದ ಇಲ್ಲಿ ರೋಗ ರುಜಿನಗಳು ಹೆಚ್ಚಾಗಿವೆ. ಇಲ್ಲಿ ಹಾಕುಸ ಕಸದಿಂದ ದುರ್ನಾತ ಬರುತ್ತಿದೆ. ಗ್ರಾಪಂ ಇಲ್ಲಿ ಕಸ ಹಾಕದಂತೆ ಕಟ್ಟುನಿಟ್ಟಾಗಿ ಆದೇಶಿಸಬೇಕು ಎಂದು  ವ್ಯಾಪಾರಸ್ಥ ಮುರುಗೇಶ ಕೊಣ್ಣೂರ ಅವರು ಹೇಳಿದ್ದಾರೆ. 

ಮಾರುಕಟ್ಟೆ ಮುಖ್ಯ ರಸ್ತೆಯ ಮೇಲೆ ಇಟ್ಟಿದ್ದು, ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಎಂಬುದು ನನ್ನ ಮತ್ತು ಗ್ರಾಪಂ ಎಲ್ಲ ಸದಸ್ಯರ ಗಮನಕ್ಕೆ ಬಂದಿದೆ. ಮಾರುಕಟ್ಟೆಗೆ ಆಗುವ ತೊಂದರೆಗಳನ್ನು ಗ್ರಾಪಂ ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳೊಂದಿಗೆ ಹಾಗೂ ಸಾರ್ವಜನಿಕರಿಗೆ ಆಗುವ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುತ್ತೇವೆ ಎಂದು ಗ್ರಾಪಂ ಅಧ್ಯಕ್ಷೆ ಕಮಲಾ ಹೊರಟ್ಟಿ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios