Asianet Suvarna News Asianet Suvarna News

ಅಥಣಿಯಲ್ಲಿ ಹೆಚ್ಚಿದ ಡೆಂಘೀ ಭೀತಿ: ಇದ್ದು ಇಲ್ಲದಂತಾದ ಸರ್ಕಾರಿ ಆಸ್ಪತ್ರೆ

ಖಾಸಗಿ ಆಸ್ಪತ್ರೆಗಳು ಫುಲ್‌| ಸ್ವಚ್ಛತೆ ಹಾಗೂ ಜಾಗೃತಿ ಕೊರತೆಯಿಂದ ಡೇಂಘಿ ಭಯ| ಗಟಾರದಲ್ಲಿ ಮಣ್ಣು ಹಾಗೂ ಕಸ-ಕಡ್ಡಿಯಿಂದ ತುಂಬಿ ಹರಿಯಬೇಕಾದ ನೀರು ಸರಾಗವಾಗಿ ಹರಿಯದೇ ನಿಂತ ನೀರಿನಲ್ಲಿಯೇ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಡೆಂಘೀ ಭೀತಿಯಲ್ಲಿ ಜೀವನ ಕಳೆಯುವಂತಾಗಿದೆ| ತಾಲೂಕಿನ ವಿವಿಧ ಗ್ರಾಮಗಳಲ್ಲಿ ಡೆಂಘೀ ಭೀತಿ| ಸ್ವಚ್ಛತೆ ಹಾಗೂ ಜಾಗೃತಿ ಕೊರತೆಯಿಂದ ಡೆಂಘೀ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ|

Dengue Fever in Athani Taluk in Belagavi Distrcit
Author
Bengaluru, First Published Oct 18, 2019, 8:54 AM IST

ಅಥಣಿ(ಅ.18): ಕಳೆದೆರಡು ತಿಂಗಳ ಹಿಂದೆ ಭಾರಿ ಪ್ರವಾಹ ಭೀತಿ ಎದುರಿಸಿದ್ದು, ಸಧ್ಯ ದುರಸ್ತಿಯಾಗದೇ ಇರುವ ಗಟಾರದಲ್ಲಿ ಮಣ್ಣು ಹಾಗೂ ಕಸ-ಕಡ್ಡಿಯಿಂದ ತುಂಬಿ ಹರಿಯಬೇಕಾದ ನೀರು ಸರಾಗವಾಗಿ ಹರಿಯದೇ ನಿಂತ ನೀರಿನಲ್ಲಿಯೇ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಡೆಂಘೀ ಭೀತಿಯಲ್ಲಿ ಜೀವನ ಕಳೆಯುವಂತಾಗಿದೆ.

ಅಥಣಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಡೆಂಘೀ ಭೀತಿ ಹೆಚ್ಚಾಗಿದ್ದು, ಸ್ವಚ್ಛತೆ ಹಾಗೂ ಜಾಗೃತಿ ಕೊರತೆಯಿಂದ ಡೆಂಘೀ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.

ಎಚ್ಚೆತ್ತುಕೊಳ್ಳದ ಇಲಾಖೆಗಳು:

ಒಂದು ವಾರದಲ್ಲಿ ಪಟ್ಟಣದಲ್ಲಿ ಡೆಂಘೀ ಜ್ವರದಿಂದ ಇಬ್ಬರು ಸಾವನಪ್ಪಿದ್ದು, ಆರೋಗ್ಯಇಲಾಖೆ, ಪುರಸಭೆ ಹಾಗೂ ತಾಲೂಕಿನಲ್ಲಿರುವ ಪಂಚಾಯತಿಗಳು ಸ್ವಚ್ಛತೆ ಹಾಗೂ ಜಾಗೃತಿಗೆ ಸಂಬಂಧಿಸಿದಂತೆ ಇನ್ನೂ ಎಚ್ಚೆತ್ತುಕೊಳ್ಳದೇ ಇರುವುದು ಜನರ ಅಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ನಿವಾಸಿ ಉದಯ ಸೋನಾರ ಎಂಬುವರ ಮಗಳು ಯೋಗಿತಾ(17) ಡೆಂಘೀ ಜ್ವರದಿಂದ ಮೃತಪಟ್ಟಿದ್ದು, ಅಲ್ಲದೇ ಗ್ರಾಮೀಣ ಭಾಗದಲ್ಲಿ ಕೂಡಾ ಜನರು ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾರೆ.

ಸಮನ್ವಯದ ಕೊರತೆ:

ಪುರಸಭೆ ಹಾಗೂ ಆರೋಗ್ಯ ಇಲಾಖೆಗಳು ಸ್ವಚ್ಛತೆಗೆ ಸಂಬಂಧಿಸಿದಂತೆ ಅಗತ್ಯ ಕಾಳಜಿ ವಹಿಸಿ ಸಾರ್ವಜನಿಕರಿಗೆ ಅವಶ್ಯಕ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಆದರೆ, ಪುರಸಭೆಯು ಈಗಾಲೇ ಸ್ವಚ್ಛತೆಯ ನಿರ್ವಹಣೆಗೆ ಪಾಗಿಂಗ್‌, ಫೌಡರ್‌ಗಳನ್ನು ಬಳಸಲು ಅಗತ್ಯ ಕ್ರಮ ಕೈಗೊಂಡು ಕಾರ್ಯ ನಿರ್ವಹಿಸಲಾಗಿದೆ ಎಂದು ಕೈ ತೊಳಿದುಕೊಂಡಿದೆ. ಹಾಗೆಯೇ ಕುಡಿಯಲು ಕಾಯಿಸಿ ಆರಿಸಿದ ಕುಡಿಯುವ ಹಾಗೂ ರೋಗ ಲಕ್ಷಣ ಕುರಿತು ಜನರಿಗೆ ತಿಳಿ ಹೇಳಿ ಜಾಗೃತಿ ಮೂಡಿಸಲಾಗಿದೆ ಎಂದು ನೂಣುಚಿಕೊಳ್ಳುತ್ತಿದೆ. ಪುರಸಭೆ ಹಾಗೂ ಆರೋಗ್ಯ ಇಲಾಖೆ ಒಟ್ಟಾಗಿ ಕಾರ್ಯ ನಿರ್ವಹಿಸುವ ಮೂಲಕ ಡೆಂಘೀ ಭೀತಿಯನ್ನು ಹೋಗಲಾಡಿಸುವ ಅಗತ್ಯತೆ ಇದೆ.

ಕಸ ವಿಲೆವಾರಿ ವಿಳಂಬ:

ಪಟ್ಟಣದ  ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಭಾರಿ ಏರಿಕೆ ಕಂಡಿದ್ದು, ಹಾಗೆಯೇ ಕಸ ಪ್ರಮಾಣವೂ ಹೆಚ್ಚಾಗಿದೆ. ಆದರೇ ಕಸ ವಿಲೇವಾರಿ ಮಾಡುವ ಕಾರ್ಮಿಕರ ತುಂಬಾ ಕಡಿಮೆ ಇದ್ದು ವಿಲೇವಾರಿ ಮಾಡುವಲ್ಲಿ ಭಾರಿ ವಿಳಂಭವಾಗುತ್ತಿದೆ. ದಿನಾಲು ತೆಗೆದುಕೊಂಡು ಹೋಗಬೇಕಾದ ಕಸವನ್ನು ಕೆಲವೊಂದು ಬಾರಿ ಬರದೇ ಗಟಾರದ ಪಕ್ಕದಲ್ಲಿಯೇ ಸುರುವಿ ಹೋಗುತ್ತಿದ್ದಾರೆ. ಬೀದಿಯಲ್ಲಿನ ನಾಯಿ ಹಾಗೂ ಹಂದಿಗಳು ಕಸ ಚೆಲ್ಲಾಡಿ ಗಟಾರಕ್ಕೆ ಬಿದ್ದು ನೀರು ಹರಿದು ಹೋಗಲು ತಡೆಯುಂಟು ಮಾಡುತ್ತಿದೆ. ಇದರಿಂದ ನಿಂತ ನೀರಿನಲ್ಲಿಯೇ ಸೊಳ್ಳೆಗಳ ಸಂತಾನ ಹೆಚ್ಚಾಗುತ್ತಿರುವುದರಿಂದ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ.

ಸರ್ಕಾರಿ ಸೇರಿ ಖಾಸಗಿ ಆಸ್ಪತ್ರೆಗಳು ಫುಲ್‌:

ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ ಸುತ್ತಮುತ್ತ, ಚರ್ಮಾಲಯ, ಲೀಡಕರ್‌ ಕಾಲೋನಿ, ಮರಾಠಗಲ್ಲಿ, ಗಸ್ತೆ ಪಾಲ್ಟ, ಶಂಕರ ನಗರ, ವಿಕ್ರಂಪುರ ಸೇರಿದಂತೆ 21 ವಾರ್ಡ್‌ಗಳಲ್ಲಿ ಅಸ್ವಚ್ಛತೆ ತಾಂಡವಾಡುತ್ತಿದೆ. ವ್ಯವಸ್ಥಿತ ಗಟಾರ ಹಾಗೂ ಅವುಗಳ ನಿರ್ವಹಣೆ, ಕಸ ವಿಲೇವಾರಿಯ ವ್ಯವಸ್ಥೆ ಅಚ್ಚುಕಟ್ಟಾಗಿಲ್ಲದ ಕಾರಣ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುತ್ತಿವೆ. ದಿನದಿಂದ ದಿನಕ್ಕೆ ಆರೋಗ್ಯದಲ್ಲಿ ವ್ಯತ್ಯಾಸ ಹೆಚ್ಚಾಗಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಇಮ್ಮಡಿಯಾಗುತ್ತಿದೆ. ಇದರಿಂದ ಆಸ್ಪತ್ರೆಗಳು ಫುಲ್‌ ಆಗಿದ್ದು, ಮಿರಜ್‌ ಹಾಗೂ ಬೆಳಗಾವಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಟ್ಟಣದಲ್ಲಿ ಸ್ಥಳೀಯ ಪುರಸಭೆ ಮತ್ತು ಗ್ರಾಪಂ ಆಡಳಿತ ಸರಿಯಾಗಿ ಸ್ವಚ್ಛತೆ ಕಾರ್ಯಕ್ರಮ ಕೈಕೊಳ್ಳದೇ ಇರುವುದರಿಂದ ಇಂತಹ ಕಾಯಿಲೆಗಳು ಅಧಿಕವಾಗುತ್ತಿವೆ. ಅಧಿಕಾರಿ ನಿರ್ಲಕ್ಷ್ಯ ವಹಿಸಿದೇ ಕೂಡಲೇ ಸೊಳ್ಳೆಗಳ ಕಾಟವನ್ನು ನಿಯಂತ್ರಣ ಮಾಡುವುದರ ಜೊತೆಗೆ ಕೂಡಲೇ ಚರಂಡಿ, ಕಸದ ರಾಶಿಗಳನ್ನು ತೆಗೆಸಲು ತುರ್ತು ಕ್ರಮ ಕೈಕೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯ.

ಸರ್ಕಾರಿ ವೈದ್ಯರ ನಿರ್ಲಕ್ಷ್ಯ

ಪಟ್ಟಣದಲ್ಲಿ 200 ಹಾಸಿಗೆ ಸೌಲಭ್ಯಯುಳ್ಳ ಆಸ್ಪತ್ರೆಯಿದ್ದರೂ ಸಕಾಲಕ್ಕೆ ವೈದ್ಯರು ಮತ್ತು ಸಿಬ್ಬಂದಿ ಬರದೇ ಹಾಗೂ ಸೂಕ್ತ ಚಿಕಿತ್ಸೆಯ ಸಲವತ್ತುಗಳು ಮತ್ತು ಔಷಧಿಗಳ ಕೊರತೆಯಿಂದ ಜನರು ಸಾಲ ಸೋಲ ಮಾಡಿ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಬಡವರಿಗೆ ಆರ್ಥಿಕ ಸಂಕಷ್ಟಕ್ಕೆ ದೂಡಿದೆ.

ಅಥಣಿ ಪುರಸಭೆ ಮತ್ತು ಆರೋಗ್ಯ ಸರಿಯಾಗಿ ಜನರಿಗೆ ತಿಳುವಳಿಕೆ ನೀಡುವುದರ ಜೊತೆಗೆ ಸ್ವಚ್ಛತೆಯ ಕಾರ್ಯಕ್ರಮಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿಲ್ಲ. ಪ್ರತಿವಾರ್ಡ್‌ ಮತ್ತು ಹಳ್ಳದ ಸುತ್ತಲೂ ಚರಂಡಿಗಳ ಸ್ವಚ್ಛತೆ ಕೈಗೊಂಡಿಲ್ಲ. ಖಾಲಿ ನಿವೇಷನಗಳಲ್ಲಿ ಕಸದ ರಾಸಿ ಮತ್ತು ಸತ್ತ ಹಂದಿಗಳನ್ನು ಎಸೆದರೂ ಸರಿಯಾಗಿ ನೋಡುತ್ತಿಲ್ಲ. ಸೊಳ್ಳೆಗಳ ಕಾಟ ಅಧಿಕವಾಗಿದ್ದರೂ ಪಾಗಿಂಗ್‌ ಬಳಸುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ ತೊಡಕರ ಅವರು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಥಣಿ ಪಟ್ಟಣದಲ್ಲಿ ಎಲ್ಲ ರಸ್ತೆಗಳಲ್ಲಿ ನಿತ್ಯ ಸ್ವಚ್ಛತೆ ಮಾಡಿಸುತ್ತೇವೆ. ಅಲ್ಲದೇ ಡಿಡಿಟಿ ಫೌಡರ್‌ ಕೂಡಾ ಹಾಕಿಸಿದ್ದೇವೆ. ಅಗತ್ಯವಿದಲ್ಲಿ ಪಾಗಿಂಗ್‌ ಮಾಡಲಾಗಿದೆ. ನಳದ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು,. ಮನೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಸಲಹೆ ನೀಡಲಾಗಿದೆ. ಈಗ ಡೆಂಘೀ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿರುವ ಮಾಹಿತಿ ಬಂದಿದೆ. ಆರೋಗ್ಯ ಇಲಾಖೆಯರ ಜೊತೆ ಚರ್ಚಿಸಿ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡಲಾಗುವುದು ಎಂದು ಅಥಣಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರೆ ಅವರು ತಿಳಿಸಿದ್ದಾರೆ.  

ಈ ಬಗ್ಗೆ ಮಾಹಿತಿ ನೀಡಿದ ಅಥಣಿ ತಾಲೂಕು ವೈದ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ ಅವರು, ಡೆಂಘೀ ಪ್ರಕರಣದಲ್ಲಿ ಯಾವುದೇ ಸಾವು ನೋವು ಆಗಿಲ್ಲ. ಸದ್ಯ ಸೊಳ್ಳೆಗಳು ಹರಡದಂತೆ ಸ್ವಚ್ಛತಾ ಕಾರ್ಯಗಳನ್ನು ತ್ವರಿತವಾಗಿ ಮಾಡಲು ನಮ್ಮ ಆರೋಗ್ಯ ಇಲಾಖೆ, ಪುರಸಭೆ ಮತ್ತು ಗಾಪಂಗಳ ಸಹಭಾಗಿತ್ವದಲ್ಲಿ ಕೆಲಸ ಪ್ರಗತಿಯಲ್ಲಿದೆ. ಅಲ್ಲದೇ ಡೆಂಘೀ ಪ್ರಕರಣಗಳ ಬಗ್ಗೆ ಸರ್ವೆ ಕಾರ್ಯ ನಡೆಸಿದ್ದೇವೆ. ಎರಡು ದಿನಗಳಲ್ಲಿ ಮಾಹಿತಿ ಲಭ್ಯವಾಗುತ್ತದೆ. ನಮ್ಮಲ್ಲಿ ಸಿಬ್ಬಂದಿ ಕೊರತೆ ಇರುವುದು ಸತ್ಯ. ಆದರೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಆರೋಗ್ಯ ತಿಳುವಳಿಕೆ ಮೂಡಿಸುತ್ತಿದ್ದಾರೆ. ನಮ್ಮಲ್ಲಿ ಡೆಂಘೀ ಚಿಕಿತ್ಸೆಗೆ ನೀಡಬೇಕಾದ ಎಲ್ಲ ಸವಲತ್ತುಗಳು ಇರುತ್ತವೆ ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios