Asianet Suvarna News Asianet Suvarna News

ಬೆಳಗಾವಿ ಜಿಲ್ಲೆಯ ನೆರೆ ಪರಿಹಾರ: 891 ಕೋಟಿ ರು. ಬಿಡುಗಡೆ

891 ಕೋಟಿ ಪೈಕಿ 419 ಕೋಟಿ ಹಣ ಖರ್ಚು| ಜಿಲ್ಲಾಧಿಕಾರಿ ಖಾತೆಯಲ್ಲಿ ಬಾಕಿ ಹಣ ಇದೆ ಎಂದ ಸಚಿವ ಸೋಮಣ್ಣ| ಪ್ರವಾಹ ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ಸಾಗಿವೆ| ಲೋಕೋಪಯೋಗಿ, ಶಿಕ್ಷಣ ಸೇರಿದಂತೆ ಇತರೆ ಇಲಾಖೆಗಳಿಂದ ಮಾಹಿತಿ ಪಡೆಯಲಾಗಿದ್ದು, ಇನ್ನೂ 100 ಕೋಟಿ ಕೆಲಸ ಪ್ರಾರಂಭಿಸಲಾಗಿದೆ|ಪ್ರವಾಹದ ಸಂದರ್ಭದಲ್ಲಿ ಜಿಲ್ಲಾಡಳಿತ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಿದೆ|

891 Crore Rs Flood Compensation Released to Belagavi District
Author
Bengaluru, First Published Nov 6, 2019, 9:16 AM IST

ಬೆಳಗಾವಿ[ನ.6]: ಜಿಲ್ಲೆಯಲ್ಲಿ ಪ್ರವಾಹ ಪರಿಹಾರ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲೆಗೆ  891 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು, ಈ ಪೈಕಿ 419 ಕೋಟಿ ಹಣ ಖರ್ಚು ಮಾಡಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಅವರು ಮಾಹಿತಿ ನೀಡಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಕಿ ಉಳಿದಿರುವ ಹಣ ಜಿಲ್ಲಾಧಿಕಾರಿ ಖಾತೆಯಲ್ಲಿದೆ. ಪ್ರವಾಹ ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ಸಾಗಿವೆ. ಲೋಕೋಪಯೋಗಿ, ಶಿಕ್ಷಣ ಸೇರಿದಂತೆ ಇತರೆ ಇಲಾಖೆಗಳಿಂದ ಮಾಹಿತಿ ಪಡೆಯಲಾಗಿದ್ದು, ಇನ್ನೂ 100 ಕೋಟಿ ಕೆಲಸ ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಚಿವನಾದ ಬಳಿಕ ಎರಡು ತಿಂಗಳು ವಿಳಂಬವಾಗಿ ನಾನು ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಜಿಲ್ಲೆಯ ಪ್ರವಾಹ ಬಾಧಿತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅತಿಯಾಗಿ ಮಳೆ ಬಿದ್ದಿರುವುದರಿಂದ ಹಾಗೂ ಮಹಾರಾಷ್ಟ್ರದ ಕೊಯ್ನಾ ಸೇರಿದಂತೆ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ 5 ಲಕ್ಷ ಕ್ಯುಸೆಕ್‌ ನೀರು ಬಿಟ್ಟಿದ್ದಿರಂದ ಪ್ರವಾಹ ಬಂದು, ನದಿ ತೀರದ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ ಎಂದರು.

ಜಿಲ್ಲಾಡಳಿತಕ್ಕೆ ಮೆಚ್ಚುಗೆ:

ಜಿಲ್ಲೆಯ 1234 ಗ್ರಮಗಳ ಪೈಕಿ 872 ಗ್ರಾಮಗಳು ಪ್ರವಾಹ ಬಾಧಿತಗೊಂಡಿದ್ದವು. 1.12 ಲಕ್ಷ ಕುಟುಂಬಗಳ 4.15 ಲಕ್ಷ ಜನರನ್ನು ಹಾಗೂ 1.10 ಲಕ್ಷ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಪ್ರವಾಹದ ಸಂದರ್ಭದಲ್ಲಿ ಜಿಲ್ಲಾಡಳಿತ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯ ಬೆಳಗಾವಿ, ಚಿಕ್ಕೋಡಿ, ಕಾಗವಾಡ, ಗೋಕಾಕ, ಮೂಡಲಗಿ, ಸವದತ್ತಿ, ಬೈಲಹೊಂಗಲ ತಾಲೂಕಿನ ಪ್ರವಾಹ ಬಾಧಿತಗೊಂಡ ಪ್ರದೇಶಕ್ಕೆ ನಾನೇ ಖುದ್ದಾಗಿ ಭೇಟಿ ನೀಡಿದ್ದೇನೆ. ಜನರು ಧೃತಿಗೆಡದೇ ತಮ್ಮ ಕಾರ್ಯದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ನೆರೆ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳು ಸ್ವತಃ ತಾವೇ ಬೆಳಗಾವಿ ಜಿಲ್ಲೆಗೆ 6 ಬಾರಿ ಭೇಟಿ ನೀಡಿದ್ದಾರೆ ಎಂದರು.

ನೇರವಾಗಿ ಪರಿಹಾರ ಜಮಾ:

ಅತಿವೃಷ್ಟಿ, ಪ್ರವಾಹದಿಂದ ಬೆಳೆ ಹಾನಿಗೀಡಾದ ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ಜಮಾ ಮಾಡಲಾಗುತ್ತಿದೆ. ಸಂಪೂರ್ಣ ಬಿದ್ದ ಮನೆಗಳ ಸಂತ್ರಸ್ತರಿಗೆ ಹೊಸ ಮನೆ ಕಟ್ಟಿಕೊಳ್ಳಲು .5 ಲಕ್ಷ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 44 ಸಾವಿರ ಮನೆಗಳ ಪೈಕಿ 39 ಸಾವಿರ ಮನೆಗಳಿಗೆ ಒಟ್ಟು 2.99 ಕೋಟಿ ಪರಿಹಾರ ವಿತರಿಸಲಾಗಿದೆ. ಸಿ ಕೆಟಗೇರಿಯಲ್ಲಿದ್ದ 23 ಸಾವಿರ ಫಲಾನುಭವಿಗಳಿಗೆ 50 ಸಾವಿರ ಬಿಡುಗಡೆ ಮಾಡಲಾಗಿದೆ. 1200 ಫಲಾನುಭವಿಗಳಗೆ ಶೆಡ್‌ ನಿರ್ಮಾಣಕ್ಕೆ 6 ಕೋಟಿ ನೀಡಲಾಗಿದೆ. ಪ್ರವಾಹದ ವೇಳೆ ಮನೆ ಸಂಪೂರ್ಣವಾಗಿ ಬಿದ್ದು ದಾಖಲೆ ಪತ್ರಗಳಿಲ್ಲದಿದ್ದರೂ ಅಂತಹ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮನೆ ಬಿದ್ದ ಸಂತ್ರಸ್ತರಿಗೆ ಪರಿಹಾರ ನೀಡಲು ಆಧಾರ್‌ ಮತ್ತು ರೇಷನ್‌ ಕಾರ್ಡ್‌ ಮಾನದಂಡವನ್ನಾಗಿಸಬೇಕು. ಸಂತ್ರಸ್ತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಸೂಚಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ, ಜಿಪಂ ಸಿಇಓ ರವೀಂದ್ರ ಕೆವಿ ಮತ್ತಿತರರು ಇದ್ದರು.
 

Follow Us:
Download App:
  • android
  • ios