Asianet Suvarna News Asianet Suvarna News

ತಿಪ್ಪೆಯಾಗಿ ಮಾರ್ಪಟ್ಟ ಇಳಕಲ್ಲ ತರಕಾರಿ ಮಾರುಕಟ್ಟೆ!

ಹೃದಯ ಭಾಗದಲ್ಲಿರುವ ಮಾರುಕಟ್ಟೆಗೆ ತೆರಳಿದರೆ ಕಸದ ರಾಶಿಯೇ ಮುಖ್ಯವಾಗಿ ಸ್ವಾಗತಿಸುತ್ತದೆ |ಇಲ್ಲಿ ಯಾರೇ ಹೊಸದಾಗಿ ಬಂದರೂ ಅಸಹ್ಯ ಹುಟ್ಟಿಸುವುದು ಗ್ಯಾರಂಟಿ| ಮೂಗು ಮುಚ್ಚಿಕೊಂಡೇ ಸಾಗಬೇಕು| ನಗರಸಭೆಯವರು ಜಾಗೃತಿ ಮೂಡಿಸಿ ಕಸ ಸಂಗ್ರಹ ಮಾಡುತ್ತಿದ್ದರೂ ಕಸದ ರಾಶಿ ಬೆಳೆಯುತ್ತಿರುವುದು ನಿಂತಿಲ್ಲ| ಗ್ರಾಹಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ| ವ್ಯಾಪಾರಕ್ಕೆ ಬಂದವರಿಗೆ ಅಸಹ್ಯ ಹುಟ್ಟಿಸುವಂತಿದೆ|

Garbage in Ilkal Vegetable Market
Author
Bengaluru, First Published Oct 16, 2019, 11:48 AM IST

ಇಳಕಲ್ಲ[ಅ.16]: ನಗರದ ಹೃದಯ ಭಾಗದಲ್ಲಿರುವ ಮಾರುಕಟ್ಟೆಗೆ ತೆರಳಿದರೆ ಕಸದ ರಾಶಿಯೇ ಮುಖ್ಯವಾಗಿ ಸ್ವಾಗತಿಸುತ್ತದೆ. ಇಲ್ಲಿ ಯಾರೇ ಹೊಸದಾಗಿ ಬಂದರೂ ಅಸಹ್ಯ ಹುಟ್ಟಿಸುವುದು ಗ್ಯಾರಂಟಿ. ಮೂಗು ಮುಚ್ಚಿಕೊಂಡೇ ಸಾಗಬೇಕು. ನಗರಸಭೆಯವರು ಜಾಗೃತಿ ಮೂಡಿಸಿ ಕಸ ಸಂಗ್ರಹ ಮಾಡುತ್ತಿದ್ದರೂ ಕಸದ ರಾಶಿ ಬೆಳೆಯುತ್ತಿರುವುದು ನಿಂತಿಲ್ಲ. ಹೀಗಾಗಿ ಗ್ರಾಹಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಹೌದು, ಭಾರತವನ್ನು ಕಸಮುಕ್ತ ಮಾಡಬೇಕು ಎಂಬ ಸದುದ್ದೇಶದಿಂದ ದೇಶದ ಪ್ರಧಾನ ಮಂತ್ರಿಗಳು ನಿತ್ಯ ಹಲವು ಯೋಜನೆ ಅನುಷ್ಠಾನಗೊಳಿಸಿ ಜಾಗೃತಿ ಮೂಡಿಸುವ ಕೆಲಸಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದಾರೆ. ಆದರೆ, ಇದಕ್ಕೆ ಅಪವಾದವೆಂಬಂತೆ ನಗರದ ಹೃದಯ ಭಾಗದಲ್ಲಿರುವ ಕಾಯಿಪಲ್ಲೆ ಮಾರುಕಟ್ಟೆಯ ಮುಂದಿನ ಪ್ರಮುಖ ರಸ್ತೆ ಸದಾ ಕಸದ ತ್ಯಾಜ್ಯದಿಂದ ಕಣ್ಣಿಗೆ ರಾಚುವ ಮೂಲಕ ಅಲ್ಲಿಗೆ ವ್ಯಾಪಾರಕ್ಕೆ ಬಂದವರಿಗೆ ಅಸಹ್ಯ ಹುಟ್ಟಿಸುವಂತಿದೆ.

ವ್ಯಾಪಾರಸ್ಥರೇ ಕಾರಣ:

ಇದಕ್ಕೆ ಕಾರಣ ನಗರಸಭೆಯವರಲ್ಲ ಆದರೆ ಇದಕ್ಕೆ ಕಾರಣ ನಾಗರಿಕರು ಎಂದರೂ ತಪ್ಪಾಗಲಾರದು. ಕಾರಣ ಇಷ್ಟೆ ಪ್ರತಿ ದಿನವೂ ಕಸ ಸಂಗ್ರಹಣೆ ಮಾಡುವ ಮೂಲಕ ಇಲ್ಲಿ ಕಸ ಹಾಕಬೇಡಿ ಎಂದು ನಗರಸಭೆ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದರೂ ಕಾಯಿಪಲ್ಲೆ ಮಾರುಕಟ್ಟೆಯ ಹತ್ತಿರ ವ್ಯಾಪಾರ ಮಾಡುವ ಕಿರುಕೊಳ ಹಾಗು ಹೋಲ್‌ಸೆಲ್‌ ವ್ಯಾಪಾರಸ್ಥರು ತಮ್ಮ ದಿನದ ವ್ಯಾಪಾರ ಮುಗಿದ ನಂತರ ತಮ್ಮ ಉಳಿದ ಕಾಯಿಪಲ್ಲೆಯನ್ನು ನಗರ ಸಭೆಯ ಗಾಡಿಗೆ ಹಾಕದೆ ಮಾರುಕಟ್ಟೆಯ ಮುಂದಿನ ರಸ್ತೆಯಲ್ಲಿ ಹಾಕುತ್ತಿರುವುದರಿಂದ ಈ ಪ್ರಮುಖ ರಸ್ತೆಯಲ್ಲಿ ಕಸ ಬಿದ್ದು ಅಲ್ಲಿ ದುರ್ನಾತ ಬಿರುತ್ತದೆ. ಅಲ್ಲದೆ ಅಲ್ಲಿ ಬಿಡಾಡಿ ದನಗಳ ಹಾವಳಿಯಿಂದ ಅಲ್ಲಿ ಹೋಗುವ ಪಾದಚಾರಿಗಳು ಹಾಗೂ ವಾಹನ ಸಂಚಾರಕ್ಕೆ ತೊಂದರೆ ಮಾಡುತ್ತಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವಿಷಯವಾಗಿ ನಗರಸಭೆಯವರು ಹಾಗೂ ಕಾಯಿಪಲ್ಲೆ ಮಾರುಕಟ್ಟೆಯ ಎದುರು ಇರುವ ಅಂಗಡಿಯವರು ಕಸ ಎಸೆಯುತ್ತಿರುವವರಿಗೆ ತಿಳಿಸಿ ಹೇಳುತ್ತಿದ್ದರೂ ಅಲ್ಲಿ ಕಸ ಹಾಕುವುದು ಮಾತ್ರ ನಿಂತಿಲ್ಲ. ಹೀಗಾಗಿ ಅಲ್ಲಿಯ ಜನರಿಗೆ ರೋಗ ರುಜಿನಗಳು ಹೆಚ್ಚಾಗುತ್ತಿದ್ದು, ಅಲ್ಲದೆ ಬೆಳೆಯುತ್ತಿರುವ ಇಳಕಲ್ಲ ನಗರಕ್ಕೆ ಹೊಲ್‌ಸೆಲ್‌ ಕಾಯಿಪಲ್ಲೆ ಮಾರುಕಟ್ಟೆಯನ್ನು ನಗರದ ಹೊರಗಡೆ ಸ್ಥಳಾಂತರಿಸಬೇಕು ಹಾಗೂ ಚಿಲ್ಲರೆ ವ್ಯಾಪಾರ ಮಾಡುವವರಿಗೆ ಕಾಯಿಪಲ್ಲೆ ಮಾರುಕಟ್ಟೆಯ ಒಳಗಡೆ ವ್ಯಾಪಾರ ಮಾಡಲು ಅವಕಾಶ ಮಾಡಬೇಕು ಎಂದು ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.

ಇದಲ್ಲದೆ ಅಲ್ಲಿ ಬೆಳಗ್ಗೆ ಕಾಯಿಪಲ್ಲೆ ಗಂಟುಗಳನ್ನು ಇಳಿಸಲು ಬರುವ ಟಂಟಂ ಗಾಡಿಗಳ ಹಾವಳಿಯಿಂದ ಆ ರಸ್ತೆಯಲ್ಲಿ ಯಾರೂ ಹೋಗಲು ಬಾರದಂತಾಗಿ ಮಳೆಯಿಂದಾಗಿ ರಸ್ತೆಯಲ್ಲಾ ರಜ್ಜಾಗಿ ಹೋಗಿದೆ. ಅಲ್ಲಿ ಸಂಚರಿಸುವ ಎಲ್ಲರೂ ನಗರ ಸಭೆ ಅಧಿಕಾರಿಗಳನ್ನು ಹಾಗೂ ಪೊಲೀಸ್‌ ಇಲಾಖೆಯವರನ್ನು ನಿಂದಿಸುತ್ತಾ ಸಂಚರಿಸುತ್ತಾರೆ.

ಒಟ್ಟಾರೆ ಇಳಕಲ್ಲ ನಗರ ಬೆಳೆದಂತೆ ನಗರದ ಕಾಯಿಪಲ್ಲೆ ಮಾರುಕಟ್ಟೆಯ ವ್ಯಾಪಾರ ಕೂಡ ಅಭಿವೃದ್ಧಿ ಹೊಂದುತ್ತದೆ ಎಂಬುದನ್ನು ಅರಿತು ಅದಕ್ಕಾಗಿ ಬೇರೆ ಕಡೆ ಸ್ಥಳಾವಕಾಶ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.

ಈ ಬಗ್ಗೆ ಮಾತನಾಡಿದ ವ್ಯಾಪಾರಸ್ಥ ಸಂಗಣ್ಣ ಮುಳಗುಂದ ಅವರು, 25 ವರ್ಷಗಳಿಂದ ನಾವು ಇಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ನಗರ ಸಭೆಯವರ ನಿರ್ಲಕ್ಷ್ಯ ಹಾಗೂ ಸಾರ್ವಜನಿಕರು ಕಸ ಹಾಕುವುದರಿಂದ ಇಲ್ಲಿ ರೋಗ ರುಜಿನಗಳು ಹೆಚ್ಚಾಗಿವೆ. ಇಲ್ಲಿ ಹಾಕುವ ಕಸದಿಂದ ದುರ್ನಾತ ಬರುತ್ತಿದೆ. ನಗರ ಸಭೆಯವರು ಇಲ್ಲಿ ಕಸ ಹಾಕದಂತೆ ಕಟ್ಟುನಿಟ್ಟಾಗಿ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ. 

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಪೌರಾಯುಕ್ತ ಜಗದೀಶ ಹುಲಗಜ್ಜಿ ಅವರು,  ಮಾರುಕಟ್ಟೆ ಮುಖ್ಯ ರಸ್ತೆ ಮೇಲೆ ಅಲ್ಲಿ ಕಸ ಹಾಕಬಾರದು ಎಂದು ಕಟ್ಟುನಿಟ್ಟಿನ ಆದೇಶ ಮಾಡುವುದರ ಜೊತೆಗೆ ಅಲ್ಲಿ ನಮ್ಮ ಒರ್ವ ಸಿಬ್ಬಂದಿ ನೇಮಿಸಿದ್ದೇವೆ ಆದರೂ ಅಲ್ಲಿ ಕೆಲವರು ಕಸ ಹಾಕುತ್ತಿರುವುದರಿಂದ ಆಗುವ ತೊಂದರೆ ನಿವಾರಣೆಗೆ ಅಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕಸ ಹಾಕುವವರನ್ನು ಗುರುತಿಸಿ ಅವರಿಗೆ ದಂಡ ಹಾಕುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ.
 

Follow Us:
Download App:
  • android
  • ios